ಬಾಗಿಸೂತ್ರ
ಬರ್ಬೆರಿಡೇಸೀ ಕುಟುಂಬಕ್ಕೆ ಸೇರಿದ ಮುಳ್ಳು ಸಸ್ಯ. ಬರ್ಬೆರಿಸ್ ಅರಿಸ್ಟೀಟ ಇದರ ವೈಜ್ಞಾನಿಕ ಹೆಸರು. ಇಂಗ್ಲಿಷ್ ರೂಢಿನಾಮ ಬರ್ಬೆರಿ. ರಕ್ಷಣೆಗಾಗಿ ಇದರ ಎಲೆಗಳು ಮೊನಚು ಮುಳ್ಳುಗಳಾಗಿ ಪರಿವರ್ತನೆಗೊಂಡಿರುವುವು.

ಬಾಗಿಸೂತ್ರ ಹಿಮಾಲಯದ ವಾಯವ್ಯ ಪ್ರಾಂತ ಕುಲು ಹಾಗೂ ಕುಮಾಂವ್ ಪ್ರದೇಶ ಮತ್ತು ದಕ್ಷಿಣದ ನೀಲಗಿರಿ ಬೆಟ್ಟಗಳಲ್ಲೂ ವಿಶೇಷವಾಗಿ ಬೆಳೆಯುತ್ತದೆ. ಇದರ ಬೇರು ಮತ್ತು ಕಾಂಡಗಳಿಂದ ಹಳದಿ ಬಣ್ಣದ ರಾಳವಸ್ತು ಲಭ್ಯವಾಗುತ್ತದೆ. ಇದನ್ನು ತೊಗಲಿಗೆ ರಂಗುಕೊಡಲು ಬಳಸುವುದುಂಟು. ಈ ರಂಗು ನೀರು ಮತ್ತು ಮದ್ಯಾರ್ಕದಲ್ಲಿ ಕರಗಬಲ್ಲದು. ಅಲ್ಲದೆ ಕ್ಷಾರೀಯ ವಸ್ತುಗಳ ಸಂಪರ್ಕಕ್ಕೆ ಬಂದರೆ ಕಂದುಬಣ್ಣಕ್ಕೆ ತಿರುಗುತ್ತದೆ. ಮೊರಾಕ್ಕೊ ತೊಗಲು ಎಂಬ ವಿಶಿಷ್ಟ ರೀತಿಯ ಚರ್ಮದ ಕೈಗಾರಿಕೆಯಲ್ಲಿ ಇದರ ಬಳಕೆ ಹೆಚ್ಚು. ಬಾಗಿ ಸೂತ್ರದ ಬೇರು ಮತ್ತು ಕಾಂಡದ ಕೆಳಭಾಗದಿಂದ ಉತ್ಪನ್ನವಾಗುವ ಕಂದು ಬಣ್ಣದ ಇನ್ನೊಂದು ವಿಶಿಷ್ಟ ವಸ್ತುವಿಗೆ ರಸಾಂತ್ ಎಂದು ಹೆಸರು. ಸಿಂಧ್ ಪ್ರಾಂತ್ಯದಲ್ಲಿ ಇದನ್ನು ನೀರಿಗೆ ಬೆರೆಸಿ ಕುಡಿಯುವುದುಂಟು. ದೇಹವನ್ನು ಇದು ತಂಪುಗೊಳಿಸುವುದು ಎನ್ನಲಾಗಿದೆ. ಇದರಲ್ಲಿ ಬರ್ಬೆರಿನ್ ಎಂಬ ರಾಸಾಯನಿಕ ಘಟಕ ಇದೆ.

ಬಾಗಿಸೂತ್ರ ಒಣಫಲಗಳಿಗೆ ಹುಳಿದ್ರಾಕ್ಷಿ ಎಂಬ ಹೆಸರೂ ಉಂಟು. ಬೀಜದಿಂದ ಒಂದು ವಿಶಿಷ್ಟ ತೈಲ ದೊರೆಯುತ್ತದೆ. ಒಟ್ಟಿನಲ್ಲಿ ಬಾಗಿಸೂತ್ರದ ಕಾಂಡ, ಬೇರು, ತೊಗಟೆ, ಕಾಯಿ ಬೀಜ ಮುಂತಾದವಕ್ಕೆ ಮಹತ್ವ ಹಾಗೂ ಉಪಯುಕ್ತತೆ ಉಂಟು.

ಗೋದಿ ಮತ್ತಿತರ ಏಕದಳ ಧಾನ್ಯ ಸಸ್ಯಗಳಿಗೆ ಮತ್ತು ಹುಲ್ಲಿನ ಜಾತಿಯ ಸಸ್ಯಗಳಿಗೆ ತಗಲುವ ಕುಂಕುಮ ಅಥವಾ ಭಂಡಾರಿ ರೋಗದ (ರಸ್ಟ್) ಮಧ್ಯವರ್ತಿ ಅತಿಥೇಯವೆಂದು ಬಾಗಿಸೂತ್ರ ಹೆಸರಾಗಿದೆ. 	
	
(ಎಂ.ಎಸ್.ಎಸ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ